ಕಂಪವಾತ : ಅಕ್ರಮ ಸೆಡವು ನಡುಕಗಳಿಂದ ಪ್ರಕಟಗೊಳ್ಳುವ ಒಂದು ನರವ್ಯಾಧಿ (ಕೋರಿಯ; ಸೆಂಟ್ ವಿಟಸ್ ಡ್ಯಾನ್ಸ್‌). ಕೀಲುಜ್ವರದ ವಿಷದ ಸೋಂಕಿನ ಫಲವಾಗಿ ಮಕ್ಕಳಲ್ಲಿ ಮತ್ತು ಯುವಕರಲ್ಲಿ ದೇಹದ ಭಾಗಗಳು ತಮ್ಮಷ್ಟೆಕ್ಕೇ ಅದುರುತ್ತ ಕಂಪವಾತದ ರೂಪದಲ್ಲಿ ತೋರುವುದಿದೆ. ಮಿದುಳಿನ ನರಮಂಡಲದಲ್ಲಿ ಊತ ಮತ್ತು ರಕ್ತ ಕಟ್ಟುತೋರಿಬರುವುದಲ್ಲದೆ ನರ ಕಣಗಳ ಕೇಂದ್ರಗಳು ಅನುವಳಿಕೆ ಹೊಂದುತ್ತವೆ. 5-20 ವರ್ಷದವರೆಗಿನವರಲ್ಲಿ ಕೂಲು ಜ್ವರದ ಫಲವಾಗಿ ಆದರ ಇತರ ಲಕ್ಷಣಗಳು ಕಾಣಿಸಬಹುದು ಇನ್ನು ಕೆಲವು ಬಾರಿ ಇದು ಕೀಲುಜ್ವರದ ಏಕಮೇವ ಲಕ್ಷಣವೂ ಆಗುವುದುಂಟು. ಮಾನಸಿಕ ಒತ್ತಡ ಮತ್ತು ಶಾಲೆಯಲ್ಲಿ ಹೆಚ್ಚು ಶ್ರಮದ ಪರಿಣಾಮವಾಗಿ ಇದು ತಲೆದೋರುವುದಿದೆ. ಕೆಲವರು ಗರ್ಭಿಣಿಯರಲ್ಲೂ ಇದು ಮೊದಲ ಬಾರಿ ಕಾಣಿಸಿಕೊಳ್ಳಬಹುದು.

ಕಂಪವಾತದ ಲಕ್ಷಣಗಳು ನಿಧಾನವಾಗಿ ಬೆಳಕಿಗೆ ಬರುವುದರಿಂದ ಅದರ ಇರುವಿಕೆಯ ಅರಿವು ಆಗುವಷ್ಟರಲ್ಲೇ ಅನೇಕ ದಿನಗಳು ಕಳೆದು ಹೋಗಿರುತ್ತದೆ. ಹೀಗೆ ದೈಹಿಕ ಕಂಪನದ ಮೇಲೆ ಹಿಡಿತವಿಲ್ಲದಿರುವುದು ರೋಗದ ಪ್ರಮುಖ ಲಕ್ಷಣ, ಏನೋ ಕೆಲಸ ಮಾಡಲು ಹೊರಟು ಅದು ಗುರಿಯನ್ನು ಮುಟ್ಟಿದೆ ಅರ್ಧಂಬರ್ಧ ಆದಂತೆ ಯದ್ವಾತದ್ವವಾಗಿ ದೇಹದ ಭಾಗಗಳನ್ನು ಆಡಿಸುವುದು ತೋರಿಬರುತ್ತದೆ. ಹುಬ್ಬು ಮೇಲೇರಿಕೆ, ತುಟಿ ಕಚ್ಚುವುದು ಕಾರಣವಿಲ್ಲದೆ ನಗು, ಹೆದರಿಸುವ ಮುಖ ಭಾಗ, ಮುಖ ಕಿವಿಚುವುದು, ತಲೆ, ಕಣ್ಣುಗುಡ್ಡೆ ಮತ್ತು ನಾಲಿಗೆಯ ಚಲನೆ ಇವನೆಲ್ಲ ಗುರುತಿಸಬಹುದು. ಆಹಾರವನ್ನು ಜಗಿಯಲು ಮತ್ತು ನುಂಗಲು ತೊಂದರೆಯಾಗುವುದು. ಅಕಾರಣವಾಗಿ ಬೆರಳು ಮೊಣಕೈ ಮಡಿಸುವುದು, ಉದ್ದ ಮಾಡುವುದು ತೋಳು ಮುಂದೆ ಚಾಚುವುದು, ಕಾಲಾಡಿಸುವುದು ತೋರಿಬರುತ್ತದೆ. ಉಸಿರಾಟದ ಗತಿಯಲ್ಲಿ ವ್ಯತ್ಯಾಸ ಮತ್ತು ಮಾತನಾಡುವುದರಲ್ಲಿ ತೊಡರುವುದು ಕಾಣಿಸುತ್ತದೆ. ಏನಾದರೂ ಕೆಲಸ ಮಾಡುವಾಗ ಮತ್ತು ಗಾಬರಿಯಾದ ಕಂಪನ ಹೆಚ್ಚಾಗುತ್ತದೆ. ಮಗು ಮಲಗಿದಾಗ ಕಂಪನ ತೋರಿಬರುವುದಿಲ್ಲ.

ಈ ರೋಗ ಸಾಧಾರಣ ಸ್ಥಿತಿಯಲ್ಲಿರುವಾಗ ಯಾವ ಕೆಲಸಕ್ಕೂ ಇದರಿಂದ ತೊಂದರೆ ಉಂಟಾಗುವುದಿಲ್ಲ. ಅದು ಉಲ್ಬಣಗೊಂಡಂತೆ ಅಸಂಬದ್ಧ ಚಲನೆ ಮತ್ತು ಕಂಪನಗಳು ತೀವ್ರವಾಗುತ್ತವೆ. ಅವನ್ನು ಹಿಡಿತಲ್ಲಿಡುವುದು ಕಷ್ಟ. ಸ್ನಾಯುಗಳ ಶಕ್ತಿ ಕುಂದಿರುತ್ತದೆ. ಮಾನಸಿಕ ಅಸ್ಥಿರತೆಯಿದ್ದರೂ ಬುದ್ಧಿಮತ್ತೆಯಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ. ಕೆಲವರಲ್ಲಿ ಹೃದಯದ ದೌರ್ಬಲ್ಯ ತೋರಿ ಅದರ ಗಾತ್ರ ದೊಡ್ಡದಾಗಬಹುದು; ಆಲಿಸಿದಾಗ ಮರಮರ ಶಬ್ದ ಕೇಳಿ ಬರಬಹುದು. ಆಗ ನಾಡಿ ತೀವ್ರಗತಿಯಿಂದ ಮಿಡಿಯುತಿರುವುದು.
ಹೆಚ್ಚು ಜನ ರೋಗಿಗಳು ಎರಡು ಮೂರು ತಿಂಗಳುಗಳಲ್ಲಿ ಗುಣಮುಖರಾಗುತ್ತಾರೆ. ಕೆಲವರಲ್ಲಿ ಒಂದು ವರ್ಷದಲ್ಲಿಯೇ ರೋಗ ಮರುಕಳಿಸಬಹುದು. ಕೆಲವರಲ್ಲಿ ಕಂಪನ ರೂಢಿಯಾಗಿ ತೋರುತ್ತ ಉಳಿಯಬಹುದು. ಈ ಲಕ್ಷಣಗಳು ತೋರಿದಾಗ ನಾಲ್ಕುವಾರ ಹಾಸಿಗೆಯಲ್ಲಿದ್ದು ಸಂಪುರ್ಣ ವಿಶ್ರಾಂತಿಯನ್ನು ಪಡೆಯಬೇಕು. ಆಸ್ಪಿರಿನ್ ಮತ್ತು ಫೀನೋಬಾರ್ಬಿಟೋನ್ ಔಷಧಗಳು ಕಂಪನವನ್ನು ಕಡಿಮೆ ಮಾಡಲು ಬಲು ಸಹಾಯಕಾರಿ. ರೋಗದಿಂದ ಚೇತರಿಸಿಕೊಳ್ಳುವಾಗ ಉತ್ತೇಜನ ಕೊಟ್ಟು ಮೊದಲಿನ ಚಟುವಟಿಕೆಯನ್ನು ಪಡೆಯುವಂತೆ ಮಾಡಬೇಕು.                             (ಪಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ